Thursday, August 4, 2011

ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ


ನಿಮ್ಮ ಸ್ನೇಹಕೆ ನಾ ಸೋತು ಹೋದನು ..........
ಎಲ್ಲೋ ಇಂಥದ್ದೊಂದು ಘಳಿಗೆಯಲ್ಲೇ ಸ್ನೇಹಕ್ಕೆ ನಾವು hats off ಎನ್ನುವುದು.ಜೊತೆಗೆ 'ಪ್ರೇಮಲೋಕ'ಕ್ಕಿಂತ 'ಸ್ನೇಹಲೋಕ' ಬೇರೆಯಾಗಿ ನಿಲ್ಲುವುದು' !ಈ ಸ್ನೇಹಲೋಕವೇ ತೀರಾ ವಿಚಿತ್ರ. ವಯಸ್ಸು, ಲಿಂಗ, ಜಾತಿ, ಧರ್ಮ ಎಲ್ಲವನ್ನು ಮೀರಿ ಬೆಳೆಯುವ ಗೆಳೆತನಕ್ಕೆ ಸರಿ ಸಾಟಿ ಗೆಳೆತನವೇ.!
ಜೀವನದ ದಾರಿಯ ಅದ್ಯಾವುದೋ ತಿರುವುಗಳಲ್ಲಿ ಸಿಗುವ ಸ್ನೇಹಿತರು ನೆಂಟರಿಗಿಂತ ಆಪ್ತರೆನಿಸಿ ಬಿಡುತ್ತಾರೆ.ಭಾವನಾ ಜೀವಿ ಎನಿಸಿಕೊಳ್ಳುವ ಮನುಷ್ಯ ಹುಟ್ಟಿದಂದಿನಿಂದ ಕೊನೆಯುಸಿರಿರುವ ತನಕವೂ ಸ್ನೇಹಿತರ ತಲಾಶಿನಲ್ಲೇ ಇರುತ್ತಾನಂತೆ.

ಗೆಳೆತನ ಎನ್ನುವುದು ಬಾಲ್ಯದಿಂದಲೇ ಇರುತ್ತದೆಯಾದರೂ.ಅದಕ್ಕೆ ಅರ್ಥ ಬರತೊಡಗುವುದು ಹದಿಹರೆಯದ ಸಮಯದಲ್ಲೇ.ಒಬ್ಬ ಮನುಷ್ಯನ ಏಳ್ಗೆ ಅಥವಾ ಅವನತಿ ಅವನ/ಅವಳ ಹದಿಹರೆಯದಲ್ಲಿ ಸಿಗುವ ಸ್ನೇಹಿತರ ಮೇಲೆ ಅವಲಂಬಿತ ಎಂದರೆ ಅತಿಶಯೋಕ್ತಿ ಅಲ್ಲ.ಬಾಲ್ಯದಲ್ಲಿ ಆಟಕ್ಕೆ ಜೊತೆಯಾಗುವವರೆಲ್ಲ ಗೆಳೆಯರೇ. ಹೆಣ್ಣು ಮಗುವಿಗಾದರೆ ಅವಳ 'ಜುಟ್ಟು ಗೊಂಬೆ' ಆತ್ಮೀಯ ಗೆಳತಿ ಎನಿಸಿ ಬಿಡುತ್ತಾಳೆ. 'ಮಗುವಿನ ನಿರ್ಜೀವ ಗೊಂಬೆಯೊಂದಿಗಿನ ಸಂಭಾಷಣೆ ಜೀವಕ್ಕೆ ಗೆಳೆತನವೊಂದರ ಮಹತ್ವವನ್ನು ಆಗಲೇ ತಿಳಿಸುತ್ತದೆ'.


ಒಂದು ಮಗು ಬೆಳೆದು ಹದಿಹರೆಯವನ್ನು ತಲುಪಿದಾಗಲೇ ಒಂದು ಜೀವಕ್ಕೆ ಹತ್ತಿರವಾದ ಗೆಳೆತನದ ಅವಶ್ಯಕತೆ ಬೇಜಾನ್ ಕಾಡುತ್ತದೆ.

ಹುಡುಗರಲ್ಲಿ ಬಯಲಲ್ಲಿ ಕ್ರಿಕೆಟ್ ಆಡುವ,ಚಿನ್ನಿದಾಂಡು ಆಡುವ ಗೆಳೆಯರ ಬಳಗ ಬಾಲ್ಯದಲ್ಲಿ ಸಾಮಾನ್ಯ.ಹುಡುಗಿಯರದಾದರೆ ಅಡುಗೆ ಆಟ, ಕುಂಟು ಬಿಲ್ಲೆಯಾಟದ ಗೆಳತಿಯರು. 'ಬಾಲ್ಯದಲ್ಲಿ 'ಸ್ನೇಹ' ಎಂದರೆ ಆಟಕ್ಕೆ ಜೊತೆಯಾಗುವವರು'. ಜೀವನದ ಆಟದಲ್ಲಿ ಜೊತೆಯಾಗುವವರೆಲ್ಲ ಸ್ನೇಹಿತರು ಎಂಬುದನ್ನು ಬಾಲ್ಯದಲ್ಲಿಯೇ ಬದುಕು ಕಲಿಸುತ್ತದೆ ಎನಿಸಿಬಿಡುತ್ತದೆ.

ಗೆಳೆತನ ಅರಳಿಕೊಳ್ಳುವ ಬಗೆಯೇ ಒಂದು ಗಿಡದಲ್ಲಿ ಮೊಗ್ಗು ಅರಳಿ ಹೂವಾದಂತೆ ನವಿರು. ಕಡಲ ಅಲೆಗಳಿಗೆ ದಡದ ಸಾಂತ್ವನದಂತೆ, ಸಾಂಗತ್ಯದಂತೆ. ಜೀವದ ಭಾವಗಳಿಗೆಲ್ಲ ಜೊತೆ ಗೆಳೆತನ. 'ನೀನು ಅತ್ತಾಗಲೆಲ್ಲ ನಿನಗೆ ಭುಜವಾಗುವೆ. ನೀನು ನಕ್ಕಾಗ ನಿನ್ನ ಕಂಗಳ ಅಂಚಿನಲ್ಲಿ ಮೂಡುವ ಗೆರೆಗಳಾಗುವೆ. ಜೀವನ ಎನ್ನುವುದರಲ್ಲಿ ಇರುವುದು ಮುಖ್ಯವಾಗಿ ಎರಡೇ ಭಾವ ನಗು- ಅಳು. ಅದೆರದಕ್ಕೆ ಜೊತೆಯಾಗುವೆ ಎನ್ನುವ ಸ್ನೇಹವನ್ನು ಜೀವನ ಎಂದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ ಅಲ್ವಾ ?

ಮನುಷ್ಯ ತನ್ನಲ್ಲಿಲ್ಲದ್ದನ್ನು ಹುಡುಕುತ್ತಲೇ ಇರುತ್ತಾನೆ. ಸಿಕ್ಕಾಗ ಅದರೆಡೆಗೆ ಆಕರ್ಷಿತವಾಗುವುದು ಸಹಜ. ಈ ಸ್ನೇಹ ಬೆಳೆಯುವುದೇ ಪರಸ್ಪರ ವಿರುದ್ಧ ಸ್ವಭಾವದವರೊಂದಿಗೆ.ಅಭಿರುಚಿ,ಆಸಕ್ತಿ,ಹವ್ಯಾಸಗಳು ಒಂದೇಬಗೆಯಾಗಿರುವವರು ಒಳ್ಳೆಯ ಸ್ನೇಹಿತರಾಗಬಹುದು. ಆದರೆ ಆತ್ಮೀಯತೆ, ಜೀವದ ಗೆಳೆತನ ಬೆಳೆಯುವುದು ವಿರುದ್ಧ ಸ್ವಭಾವದವರೊಂದಿಗೆ. ಪರಸ್ಪರ ಅಂತರ ಗಳನ್ನು ಗೌರವಿಸಿದಾಗಲೇ ಅಲ್ಲಿ ಆತ್ಮೀಯತೆಯ ಮೊಳಕೆಯೊಂದು ಮೂಡುವುದು. ಜೀವನ 'ಜೀವನ' ಎನಿಸಿಕೊಳ್ಳುವುದೂ ಕೂಡ ಎಲ್ಲೋ ಅದೇ ಹಂತದಲ್ಲಿ.

ಜಗಳವಾಡುತ್ತಲೇ ಇರುವ ಗೆಳತಿಯರು ಜೀವದ ಗೆಳತಿಯರು:

ಹುಡುಗಿಯರ ನಡುವಿನ ಸ್ನೇಹದ ಜಗತ್ತೇ ಬೇರೆ.ಆ ಜಗತ್ತಿನಲ್ಲಿ ಗಾಸಿಪ್ ಗಳಿವೆ, ಬಣ್ಣಬಣ್ಣದ ಚಂದನೆಯ ಅಂಗಿಗಳಿವೆ. ಕ್ಲಿಪ್ನಿಂದ ಹಿಡಿದು ಚಪ್ಪಲಿಯವರೆಗಿನ ಮ್ಯಾಚಿಂಗ್ ಸಂಗತಿಗಳಿವೆ. ಅದ್ಯಾವುದೋ ಚಾನೆಲ್ಲಿನ, ಅದ್ಯಾವುದೋ ಧಾರಾವಾಹಿಯ ಕಥೆಯಿದೆ. ನೇರ ಕೂದಲಿನ, ಮೊನಚು ಕಂಗಳ ಹುಡುಗನ ನೋಟದ ಬಗ್ಗೆ 'ಗುಸು ಗುಸು' 'ಪಿಸು ಪಿಸು' ಇದೆ. ಬೆಂಚಿನಲ್ಲಿ ಪಕ್ಕ ಕೂರುವ ಗೆಳತಿಗೆTest ಪೇಪರಿಗೆ ಹೆಚ್ಚು ಅಂಕ ಬಂದದ್ದಕ್ಕಾಗಿ ಹೊಟ್ಟೆಯೊಳಗೊಂದು ತಣ್ಣನೆಯ ಹೊಟ್ಟೆ ಕಿಚ್ಚಿದೆ. ಬಳಸುವ ಶಾಂಪೂ, ನೈಲ್ polishಗಳ ಕುರಿತು ಗಂಭೀರವೆನಿಸುವ ಚರ್ಚೆಯಿದೆ. ಇನ್ನೊಬ್ಬಳ ಸಲ್ವಾರಿನ ಬಗ್ಗೆ, V neck ಟೀಶರ್ಟ್ ಬಗ್ಗೆ, ಹೊಸ hair style ಕುರಿತು ಕಾಮೆಂಟುಗಳಿವೆ. ರಾತ್ರಿ ತಾನು ಮೆಸೇಜ್ ಮಾಡಿದರೆ ಬೈಯ್ಯುವ, ಅಣ್ಣ ಮಧ್ಯ ರಾತ್ರೆಗೆ ಫೋನ್ ನಲ್ಲಿ ಮಾತನಾಡಿದರೂ ಏನೂ ಹೇಳದ ಅಮ್ಮನ ಬಗ್ಗೆ ಆಕ್ಷೇಪವಿದೆ. ಹುಚ್ಚು ಹಿಡಿಸುವ ಭಾವಗೀತೆಯೊಂದರ ಸಾಲಿದೆ.

No comments:

Post a Comment